FUTURE IS OURS

Wednesday, August 18, 2010

speech of swami vivekananda

SWAMI VIVEKANANDA SPEECH
'ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.'
.
.“ಅಮೇರಿಕಾದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋಟ್ಯಾಂತರ ಹಿಂದುಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.
ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.
ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”
ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’
ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”.
.
.
"ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದ್ದು , ಇದನ್ನು ವಿಸ್ಮಯ ಓದುಗರಿಗೆ ಅರ್ಪಿಸಲು ತುಂಬಾ ಹೆಮ್ಮೆ ಅನಿಸುತ್ತಿದೆ. ಪ್ರತಿಯೊಬ್ಬ ಭಾರತೀಯನು ಸಾರ್ವಕಾಲಿಕ ಶ್ರೇಷ್ಠವಾದ ನಮ್ಮ ಈ ದೇಶವನ್ನು , ಧರ್ಮವನ್ನು ಸದಾಕಾಲ ಗೌರವಿಸುವಿರೆಂದು ನಂಬಿರುತ್ತೇನೆ. Always Proud To be an INDIAN".

--

No comments:

Post a Comment